ಕಡಿದು : ಸಾಮಾನ್ಯವಾಗಿ ಒಂದೇ ದಿಕ್ಕಿನಲ್ಲಿ ಓಲಿರುವ ಶಿಲಾ ಪ್ರಸ್ತರಗಳಿಂದಾದ ಬೆಟ್ಟಗಳು ಪ್ರಸ್ತರಗಳ ಇಳಿವೋರೆಯ ದಿಕ್ಕಿನಲ್ಲಿ ಅಷ್ಟು ಉಬ್ಬುತಗ್ಗುಗಳಿಲ್ಲದ ಸುಗಮವಾದ ಮೇಲ್ಮೈಯನ್ನೂ ಅದರ ವಿರುದ್ಧ ದಿಕ್ಕಿನಲ್ಲಿ ಬಹು ಕಡಿದಾದ ಮೇಲ್ಮೈಯನ್ನೂ ಪ್ರದರ್ಶಿಸುತ್ತವೆ. ಇವನ್ನು 
ಅನುಕ್ರಮವಾಗಿ ಬೆಟ್ಟದ ಇಳಿಜಾರು ಮತ್ತು ಬೆಟ್ಟದ ಕಡಿದು ಎನ್ನಬಹುದು.  ಹೆಚ್ಚು ಶ್ರಮವಿಲ್ಲದೆ, ಇಳಿಜಾರಿನ ಕಡೆ, ಬೆಟ್ಟವನ್ನು ಹತ್ತಿ ಇಳಿಯಬಹುದು.  ಅಲ್ಲದೆ ಈ ಇಳಿಜಾರಿನುದ್ದಕ್ಕೂ ಶಿಲಾಸಮೂಹದ ಕೇವಲ ಒಂದೇ ಒಂದು ಪ್ರಸ್ತರ ಗೋಚರವಾಗುತ್ತವೆ. ಆದರೆ 
ಕಡಿದಾಗಿರುವ ಕಡೆ ಬೆಟ್ಟವನ್ನು ಹತ್ತುವುದೂ ಇಳಿಯುವುದೂ ಬಹು ಶ್ರಮವಾದ ಕೆಲಸ. ಈ ಪಾಶರ್ವ್‌ದಲ್ಲಿ ಹೆಚ್ಚಿನ ಏರುಪೇರುಗಳಿರುವುದೂ ಸಾಮಾನ್ಯ. ಅಲ್ಲದೆ ಇಲ್ಲಿ ಶಿಲಾ ಸಮೂಹದ ನಾನಾಬಗೆಯ ಪ್ರಸ್ತರಗಳನ್ನೂ ಗುರುತಿಸಬಹುದು. ವಿವೇಚಿಸುವುದಾದರೆ ಕಡಿದು 
ದೈಹಿಕವಾಗಿ ಶ್ರಮಸಾಧ್ಯವಾದರೂ ವೈಜ್ಞಾನಿಕವಾಗಿ ಭೂವಿಜ್ಞಾನಿಗೆ ನಿಸರ್ಗದ ವರವಿದ್ದಂತೆ. ಕಾರಣ, ಬೆಟ್ಟದ ಕಡಿದಾದ ಪಾಶರ್ವ್‌ದಲ್ಲಿ ವಿವಿಧ ಶಿಲಾ ಪ್ರಸ್ತರಗಳನ್ನು ಅಧ್ಯಯನ ಮಾಡಬಹುದು.  ಕೆಲವು ಬೆಟ್ಟಗಳ ಕಡಿದಿನಲ್ಲಿ ಕಂಡುಬರುವ ಶಿಲಾಪ್ರಸ್ತರಗಳು ತಮ್ಮ 
ಸಂಯೋಜನೆ ಮತ್ತು ರಚನೆಯಲ್ಲಿ ಏಕರೀತಿಯವಾಗಿರದ ಕಾರಣ ಜಾಳಾದ ರಚನೆಯುಳ್ಳ ಪ್ರಸ್ತರಗಳು ಗಾಳಿಮಳೆಗಳ ಹಾವಳಿಗೆ ಸಿಕ್ಕಿ ಸುಲಭವಾಗಿ ನಶಿಸಿ ಹೋಗುತ್ತವೆ. ಆದರೆ ಗಡಸು ರಚನೆ ಮತ್ತು ಕ್ಲಿಷ್ಟ ಸಂಯೋಜನೆಯುಳ್ಳ ಶಿಲಾಪ್ರಸ್ತರಗಳು ಸುಲಭವಾಗಿ ಸವೆಯದೆ 
ಸವೆದ ಪ್ರಸ್ತರಗಳ ನಡುವೆ ಎದ್ದು ಕಾಣುತ್ತವೆ. ಹೀಗಾಗುವುದರಿಂದ ಬೆಟ್ಟದ ಕಡಿದು ಇನ್ನೂ ಹೆಚ್ಚು ಕ್ಲಿಷ್ಟವಾಗಿ ಹತ್ತಿ ಇಳಿಯಲು ಎಂದಿಲ್ಲದ ಶ್ರಮ ವಹಿಸಬೇಕಾದೀತು. ಆಂಧ್ರ ಪ್ರದೇಶದ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳಲ್ಲಿನ ಕಡಪ ಶಿಲಾಸ್ತೋಮಕ್ಕೆ ಸೇರಿದ ಅನೇಕ ಬೆಟ್ಟಗಳಲ್ಲಿ ಕಡಿದು ಮತ್ತು ಇಳಿಜಾರುಗಳನ್ನು ಸುಲಭವಾಗಿ ಗುರುತಿಸಬಹುದು. (ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ